೫. ಸಮಸ್ಥಿತಿಯ ಇತರರು (ನನ್ನಂಥವರ ಜೊತೆ ಚರ್ಚೆ)

ವಿಷಯ ತಿಳಿದ ೭-೮ ದಿನಗಳಲ್ಲಿ ನನ್ನ ವೈದ್ಯ ಮಿತ್ರ ನನಗೆ ಒಂದು ಸಲಹೆ ಕೊಟ್ಟ "ಕೆಲವು ಅಂತರ್ಜಾಲದಲ್ಲಿರುವ ಸಮೂಹಗಳಲ್ಲಿ ನೊಂದಾಯಿಸಿಕೊ, ಅಲ್ಲಿ ಆಗಲೇ ನೊಂದಾಯಿತ ಜನರ ಜೊತೆ ಚರ್ಚಿಸು, ಮಾಹಿತಿ ಕಲೆ ಹಾಕು, ನಿನಗೆ ಆತ್ಮ ವಿಶ್ವಾಸ ಹೆಚ್ಚುತ್ತದೆ" ಅಂತ. ಮೊದಲಿಗೆ ನನಗೆ ಯಾರು ಏನೇ ಹೇಳಿದರೂ ನನ್ನ ತಲೆಗೆ ಹತ್ತುತ್ತಿರಲಿಲ್ಲ. ಹಾಗೆಯೇ ಈ ಸಲಹೆಯ ಬಗ್ಗೆ ಕೂಡ ನಾನು ಅಷ್ಟಾಗಿ ಯೋಚಿಸಲಿಲ್ಲ. ಆದರೆ ನನಗೆ ಆಯುರ್ವೇದ ಔಷಧಿಯ ಮಾಹಿತಿ ಎಲ್ಲೂ ಸಿಗದಿದ್ದಾಗ ನನಗೆ ನನ್ನ ಮಿತ್ರ ಹೇಳಿದ ಸಲಹೆ ನೆನಪಾಗಿ ಒಂದು ಆಲೋಚನೆ ಹೊಳೆಯಿತು. ಯಾಕೆ ನಾನು ಅಂತರ್ಜಾಲದ ಸಮೂಹದಲ್ಲಿರುವವರನ್ನು ಆಯುರ್ವೇದ ಔಷಧಿ ಬಗ್ಗೆ ಖುದ್ದಾಗಿ ಕೇಳಬಾರದು. ಹಾಗೆ ಯೋಚಿಸಿದ್ದೆ ತಡ, ನಾನು ತಕ್ಷಣ ಒಂದು ಸಾಮಾಜಿಕ ತಾಣದಲ್ಲಿ ನನ್ನದೊಂದು ಮಿಥ್ಯ ಖಾತೆ ತೆರೆದೆ. ನಿಧಾನಕ್ಕೆ ಒಂದೊಂದಾಗಿ ಹಲವು ಜನರ ಸಂಪರ್ಕ ಸಾಧ್ಯವಾಯಿತು.

ನಾನು ಎಷ್ಟು ಜನರನ್ನು ಮಾಹಿತಿಗೋಸ್ಕರ ಸಂಪರ್ಕಿಸಿದೆನೋ ಅವರೆಲ್ಲ ಅಲ್ಲೊಪಥಿ ಔಷಧಿಯನ್ನೇ ಅವಲಂಭಿಸದವರಾಗಿದ್ದರು. ಒಂದಿಬ್ಬರು ಪ್ರಾರಂಭದಲ್ಲಿ ಆಯುರ್ವೇದ ಔಷಧಿ ತೆಗೆದುಕೊಂಡರೂ ಅವರು ಕೂಡ ಸ್ವಲ್ಪ ಸಮಯದ ನಂತರ ಅಲ್ಲೊಪಥಿಗೆ ಶರಣಾಗಿದ್ದರು. ಅಲ್ಲೊಪಥಿ ಅವಲಂಬನೆ ಎಲ್ಲರಿಗೂ ಅನಿವಾರ್ಯವಾಗಿತ್ತು. ಮೊದಲೆಲ್ಲ ಈ ರೀತಿ ಸಿಕ್ಕವರು ಕೂಡ ಎಆರ್ಟಿಯೇ ಒಳ್ಳೆಯದು ಅದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಹೇಳುವವರೇ ಇದ್ದರು. ನಂತರ ಕೆಲವು ವಿಚಿತ್ರ ಹಾಗೂ ವಿಭಿನ್ನ ವ್ಯಕ್ತಿಗಳ ಪರಿಚಯವೂ ಆಯಿತು. ವಿಚಿತ್ರ ವ್ಯಕ್ತಿಗಳು ಅಂದರೆ ವೈರಾಣು ಬಗ್ಗೆ ಎಳ್ಳಷ್ಟು ಗೊತ್ತಿಲ್ಲದವರು, ಸಾಮಾನ್ಯವಾಗಿ ರೋಗ ಹರಡುವ ವಿಷಯಗಳ ಅರೆಬರೆ ಮಾಹಿತಿವುಳ್ಳವರು, ಇನ್ನು ಯಾವುದೋ ಒಬ್ಬ ವೈದ್ಯ ಅಥವಾ ಒಂದು ಔಷಧಿಯನ್ನು ಪ್ರೋತ್ಸಾಹಿಸುವ ಉದ್ದೇಶದ ಒಳಸಂಚಿನ ವ್ಯಕ್ತಿಗಳು. ಇವರ ಬಗ್ಗೆ ಮಾತಾಡಿದಷ್ಟು ಸಮಯವೇ ವ್ಯರ್ಥ.

ಇನ್ನು ವಿಭಿನ್ನ ವ್ಯಕ್ತಿಗಳೆಂದರೆ ನನ್ನ ಗಮನ ಸೆಳೆದು ನನಗೆ ಕೆಲವು ಮಾಹಿತಿಗಳನ್ನು ಕೊಟ್ಟವರು. ಇದರಲ್ಲಿ ಒಬ್ಬೊಬ್ಬರದು ಒಂದೊಂದು ರೀತಿ, ಒಂದೊಂದು ಕಥೆ. ಕೆಲವು ಜನ ಅವಶ್ಯಕತೆಯಿಲ್ಲದಿರುವದರಿಂದ ಎಆರ್ಟಿ ತಗೆದುಕೊಂಡಿಲ್ಲ ಇನ್ನೂ ಕೆಲವರು ನನ್ನಂತೆ ಹಠಹಿಡಿದವರು, ಸಾಧ್ಯವಾದಷ್ಟು ಎಆರ್ಟಿಯನ್ನು ದೂರವಿಡುವವರು. ಸಿಡಿ೪ ಸಂಖ್ಯೆ ೫೦೦ಕ್ಕಿಂತ ಹೆಚ್ಚಿರುವದರಿಂದ ಸರಕಾರ ನಿಗದಿಸಿದ ಮಿತಿಗಿಂತ ಕೆಳಗೆ ಬಂದರೆ ಔಷಧಿ ತೆಗೆದುಕೊಳ್ಳೋಣ ಅನ್ನುವ ಇಂಜಿನೀಯರಿಂಗ್ ಕೊನೆ ವರ್ಷದ ವಿದ್ಯಾರ್ಥಿ.  ಎಆರ್ಟಿ ಸೇವನೆಯೊಂದಿಗೆ ಸುದರ್ಶನ ಕ್ರಿಯೆಯನ್ನು ನಿಯಮಿತವಾಗಿ ಮಾಡುವ ಐಟಿ ಉದ್ಯೋಗಿ. ಕೇವಲ ವಿಟಾಮಿನ್ ಮಾತ್ರೆ ಮತ್ತು ನಿಯಮಿತ ವ್ಯಾಯಾಮಗಳಿಂದ ಆರೋಗ್ಯ ಸುಸ್ಥಿತಿ ಕಾಯ್ದಿರಿಸಿಕೊಂಡ ಇಂಜಿನಿಯರ್. ಯಾವುದೇ ರೀತಿಯ ಔಷಧಿ ತೆಗೆದುಕೊಳ್ಳದೇ ಕೇವಲ ಪ್ರಾಣಿಕ್ ಹೀಲಿಂಗ್ ಅನ್ನು ಅವಲಂಬಿಸಿ ಅರೋಗ್ಯವಂತನಾಗಿರುವ ಶಿಕ್ಷಕ. ದಿನ ನಿತ್ಯ ಕೇವಲ ಲೋಳೆಸರದ ರಸ ಮತ್ತ್ತು೫-೬ ಲಿಟರ್ ನೀರು ಸೇವಿಸಿ ೮ ವರ್ಷದಿಂದ ಅರೋಗ್ಯದಿಂದಿರುವ ಇನ್ನೊಬ್ಬ ಇಂಜಿನಿಯರ್. ಯಾವುದೇ ರೀತಿಯ ವ್ಯಾಯಾಮ ಅಥವಾ ಯೋಗ ಮಾಡದೇ, ಅಲ್ಲೋಪಥಿ. ಆಯುರ್ವೇದ ಅನ್ನದೇ ಯಾವುದೇ ಔಷಧಿಯನ್ನು ಕೂಡ ತೆಗೆದುಕೊಳ್ಳದೇ ಕೇವಲ ಲೋಳೆಸರ ಮತ್ತು ನೆಲ್ಲಿಕಾಯಿಯ ರಸಗಳನ್ನು ಸೇವಿಸುತ್ತಾ ೧೩ ವರ್ಷದಿಂದ ವೈರಾಣು ಹೊತ್ತು ತಿರುಗುತ್ತಿರುವ ವಿಶಿಷ್ಟ ವ್ಯಕ್ತಿತ್ವದ ಬಿಪಿಓ ಒದ್ಯೋಗಿ ತಪನ್. ಇವರಲ್ಲೆಲ್ಲ ತಪನ್ ಒಬ್ಬನನ್ನು ಬಿಟ್ಟರೆ ಮಿಕ್ಕವರೆಲ್ಲ ಅವಿವಾಹಿತರು.

Comments

Popular posts from this blog

೧. ಫಲಿತಾಂಶ

೮. ಎ ಆರ್ ಟಿ

೨. ಪರಿಣಾಮ