೮. ಎ ಆರ್ ಟಿ

ಆರು ತಿಂಗಳ ನನ್ನ ಆಯುರ್ವೇದದ ಪ್ರಯತ್ನ ಫಲಿಸಲಿಲ್ಲ. ೫-೬ ಆಯ್ಯುರ್ವೇದ ಆಸ್ಪತ್ರೆ ಮತ್ತು ವೈದ್ಯರನ್ನು ಫೋನಿನಲ್ಲಿ ಸಂಪರ್ಕಿಸಿದ ನಂತರ ನಾನು ಒಬ್ಬ ಕರ್ನಾಟಕದ ಮಲೆನಾಡಿನ  ಆಯುರ್ವೇದ ವೈದ್ಯರಲ್ಲಿ ನನ್ನ ಹುಡುಕಾಟ ನಿಲ್ಲಿಸಿದೆ. ಅವರು ಕೊಟ್ಟ ಮಾತ್ರೆಗಳನ್ನು ಸರಿಯಾಗಿ ಸವಿಸುತ್ತಿದ್ದೆ ಆದರೆ ಯಾವುದೇ ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಮಾಡುತ್ತಿರಲಿಲ್ಲ. ಅವರ ಮಾತ್ರೆಗಳ ಜೊತೆಗೆ, ಚ್ಯವನಪ್ರಾಶ ಮತ್ತು ಲೋಳೆಸರದ ರಸವನ್ನು ಕುಡಿಯುತ್ತಿದ್ದೆ. ಸ್ವಲ್ಪ ಹಸಿರು ಚಹಾ (ಗ್ರೀನ್ ಟೀ) ಕೂಡ ಪ್ರಯತಿನಿಸಿದೆ.  ಯಾವುದೂ ನನ್ನ ಸಿಡಿ೪ ನಿಯಂತ್ರಣ ಅಥವಾ ಅದನ್ನು ಹೆಚ್ಚಿಸುವಲ್ಲಿ ಫಲಕಾರಿಯಾಗಲಿಲ್ಲ. ಹಠಕ್ಕೆ ಬಿದ್ದವರಂತೆ ನನ್ನ ವೈದ್ಯ ಗೆಳೆಯನಿಂದ ನಾನು ೬ ತಿಂಗಳ ಕಾಲಾವಾಕಾಶ ಪಡೆದಿದ್ದೆ. ೬ ತಿಂಗಳ ನಂತರದ ನನ್ನ ರಕ್ತ ಪರೀಕ್ಷೆಯ ಫಲಿತಾಂಶ ಆಶಾದಾಯಕವಾಗಿರಲಿಲ್ಲ. ನನ್ನ ಸಿಡಿ೪ ಕೆಳೆಗಿಳಿದಿದ್ದು, ಇಪ್ಪತ್ತು ಸಾವಿರವಿದ್ದ ವೈರಲ್ ಲೋಡ್ ಕೂಡ  ೨ ಲಕ್ಷಕ್ಕೆ ಬಂದು ನಿಂತಿತ್ತು. ಕೊನೆಗೆ ನಾನು ಸೋತು, ಬೆಂಗಳೂರಿನ ಹಿರಿಯ ಅಲೋಪಥಿಯ ಎಚ್.ಐ.ವಿ.  ತಜ್ಞ ವೈದ್ಯರ ಹತ್ತಿರ ಮರಳಿ ಹೋಗಿ ಔಷಧಿ ಕೊಡಿ ಅಂತ ಕೇಳುವ ಪರಿಸ್ಥಿತಿ ಬಂತು. ಅವರ ಬಳಿ ಯಾವ ಮುಖವಿಟ್ಟುಕೊಂಡು ಹೋಗುವುದು ಎಂದು ಸ್ವಲ್ಪ ಚಿಂತೆ ಕೂಡ ಆಗಿತ್ತು. ಅವರೇನಾದರೂ "ನಾನು ಹೇಳಿದಂತೆ ನೀನು ಮತ್ತೆ ನನ್ನ ಹತ್ತಿರಾನೇ  ಬಂದೆ ತಾನೇ? ನಿನ್ನ ಆಯುರ್ವೇದದ ಆಟ ಏನೂ ನಡಿಲಿಲ್ಲವಲ್ಲಾ?"  ಎಂದು ಹಿಯಾಳಿಸುತ್ತಾರೆ ಅಂತ ಭಯವಾಗಿತ್ತು. ಆದರೆ ನನಗೆ ಬೇರೆ ವಿಧಿಯೇ ಇರಲಿಲ್ಲ. ಅವರ ಬೆಟ್ಟಿಯಾಗುವುದೊಂದೇ ಉಳಿದ ದಾರಿಯಾಗಿತ್ತು. ಆಗಲೇ ನಾನು ಆರು ತಿಂಗಳು ವ್ಯಯಿಸಿ ನನ್ನ ಆರೋಗ್ಯ ಸ್ವಲ್ಪ ಹದಗೆಡಿಸಿದ್ದೆ. ಆರೋಗ್ಯ ಹದಗೆಟ್ಟ ಲಕ್ಷಣಗಳೇನೂ ಮೇಲ್ನೋಟಕ್ಕೆ ಕಾಣುತ್ತಿರಲಿಲ್ಲ, ಆದರೆ ರಕ್ತ ಪರೀಕ್ಷೆಯ ಫಲಿತಾಂಶ ಅದನ್ನು ಹೇಳುತ್ತಿತ್ತು. ಇನ್ನೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವ ಸಾಧ್ಯತೆಯಿರಲಿಲ್ಲ. ನಾನೂ ಕೂಡ ಅಲೋಪಥಿಗೆ ಶರಣಾಗಬೇಕೆಂದು ಸೋತು ಹೋಗಿದ್ದೆ.

ಆ ವೈದ್ಯರು ಸಾಕಷ್ಟು ಅನುಭವಸ್ಥ ಹಿರಿಯರಾಗಿದ್ದರಲ್ಲದೇ, ತುಂಬಾ ಶಾಂತ ಸ್ವಭಾವದವರಾಗಿದ್ದರು. ನಾನು ಅಂದುಕೊಂಡಂತೆ ಅವರೇನು ನನ್ನ ಹಿಯಾಳಿಸಲಿಲ್ಲ. ಎಲ್ಲ ರಕ್ತ ಪರೀಕ್ಷೆಯ ರಿಪೋರ್ಟಗಳನ್ನು ನೋಡಿದ ಮೇಲೆ ಒಬ್ಬ ಎ.ಆರ್.ಟಿ. ಏಜಂಟ್ ನ ದೂರವಾಣಿ ಸಂಖ್ಯೆ ಕೊಟ್ಟು ಸಂಪರ್ಕಿಸಲು ಹೇಳಿದರು. ಜೊತೆಗೆ ಒಂದು ಪ್ರಿಸ್ಕ್ರಿಪ್ಷನ್ ಪತ್ರ ಕೊಟ್ಟರು.  

Comments

Popular posts from this blog

೧. ಫಲಿತಾಂಶ

೬. ನನ್ನ ಸೂತ್ರ