೧. ಫಲಿತಾಂಶ

ಸೂಜಿ, ಚುಚ್ಚುಮದ್ದಿಗೆ ಹೆದರುವ ನಾನು ಇಲ್ಲಿಯವರೆಗೆ ಅಂದರೆ ನನ್ನ ೩೬ ವಯ್ಯಸ್ಸಿನವರೆಗೂ  ಬೆರೆಳೆಣಿಕೆಯಷ್ಟೇ ಚುಚ್ಚುಮದ್ದು  ಹಾಕಿಸಿಕೊಂಡಿರಬಹುದು. ಅವತ್ತು ನನ್ನ ಕೈಯಿಂದ ರಕ್ತವನ್ನು ಒಂದು ಪ್ಲಾಸ್ಟಿಕ್ ಸೀಸೆಯಲ್ಲಿ ಮೆಲ್ಲಗೆ ನಗುನಗುತಾ, ನೋವಾಗದಂತೆ ಹೀರಿಕೊಂಡ ಷೂಶ್ರುಕಿ ಅಷ್ಟೇನೂ ಕ್ರೂರಿಯಾಗಿ ಕಾಣಲಿಲ್ಲ ಆದರೆ ಅವಳು ಮಾಡಿದ ರಕ್ತ ಪರೀಕ್ಷೆಯ ಫಲಿತಾಂಶ ಮಾತ್ರ ತುಂಬಾ ಕ್ರೂರವಾಗಿ ನೋವನ್ನು ಕೊಟ್ಟಿತ್ತು. ಆ ಕ್ರೂರತೆ ನನ್ನಲ್ಲಿ ಎಂದೂ ಕಾಣದ ಒಂದು ಭಯ ಮತ್ತು ದುಃಖಗಳನ್ನು ತಂದಿಟ್ಟಿತ್ತು. ರಕ್ತ ಪರೀಕ್ಷೆಯ ಫಲಿತಾಂಶವನ್ನು ನನಗೆ ಆಘಾತವಾಗದ ರೀತಿಯಲ್ಲಿ ಹೇಳಲು ನನ್ನೆದುರಿಗೆ ಕುಳಿತ ವ್ಯಕ್ತಿ ನನಗೆ ಫಲಿತಾಂಶ ತಿಳಿಸಿ ಕೌನ್ಸೆಲಿಂಗ್ ಮಾಡಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ. "ಇದೇನೂ ಅಷ್ಟು ಭಯ ಬೀಳುವಂತಹ ರೋಗವಲ್ಲ, ಈಗ ಇದಕ್ಕೆ ಔಷಧಿಯಿದೆ, ಸಂಪೂರ್ಣ ಗುಣವಾಗದಿದ್ದರೂ, ನೀವು ಸಾಮಾನ್ಯ ಜೀವನ ನಡೆಸಬಹುದು" ಅಂತ ಪರಿ ಪರಿಯಾಗಿ ಹೇಳುತಿದ್ದ. ಅದೆಲ್ಲ ನನಗೆ ಆವಾಗ ಗೊತ್ತಿಲ್ಲದ  ವಿಷಯವಾಗಿದ್ದರೂ ಆ ಘಳಿಗೆಯಲ್ಲಿ ನನಗೆ ಅವನು ಹೇಳುವ ಯಾವುದೇ ವಿಷಯವನ್ನು ಅರಿತುಕೊಳ್ಳುವ ಅಥವಾ ಅವನ ಸಮಾಧಾನದ ಸಾಂತ್ವನದ ಮಾತು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. "ನೀವು ಆಘಾತಕ್ಕೊಳಗಾಗ ಬೇಡಿ, ಧೈರ್ಯದಿಂದಿರಿ" ಎಂದು ಅವನು ಒತ್ತಿ  ಹೇಳುತ್ತಿದ್ದ. ನನ್ನ ತಲೆಯಲ್ಲಿ ಏನು ಓಡುತ್ತಿತ್ತೋ, ಒಟ್ಟಾರೆ ತುಂಬಾ ಖಾಲಿ, ಏಕಾಂಗಿ ಆಗಿದ್ದೆ.   "ಇಲ್ಲಾ ನೀವು ಹೇಳಿ" ಅಂತ ಅವನಿಗೆ ಹೇಳಿದೆ. "ನಿಮ್ಮ ಮುಖದಲ್ಲಿ ನನಗೆ ಆಘಾತ ಕಾಣಿಸುತ್ತಿದೆ ಅದಕ್ಕೆ ಹೇಳಿದ್ದು" ಅಂತ ನನಗೆ ಸಾಬೀತಿನ ಜೊತೆಗೆ ತನ್ನ ಮಾತನ್ನು ಬಲಪಡಿಸಿ ಹೇಳಿದ. ಆ ಘಳಿಗೆಯಲ್ಲಿ ನನಗಾದ ಭಯ, ಆಘಾತ, ದುಃಖ ನನಗೆ ಬಚ್ಚಿಡಲಾಗಲಿಲ್ಲ. ನಾನು ಸಧ್ಯದಲ್ಲೇ ಸಾಯುತ್ತೇನೆ ಅನ್ನುವ ಭಯ ಆ ಕ್ಷಣದಲ್ಲೇ ನನ್ನನ್ನು ಆವರಿಸಿತು. ಸಾವು ಎಲ್ಲರಿಗೂ ಇದ್ದೇಯಿರುವುದು ಆದರೂ, ಆ ಕ್ಷಣದಲ್ಲಿ ಮಾತ್ರ, ಈ ಸಾವು ನನ್ನ ಹತ್ತಿರ ಬರುತ್ತಿದೆ ಅನ್ನುವ ಭಯಂಕರ ವಿಚಾರ ಮನದಲ್ಲಿ ಬೆಳೆಯಲಿಕ್ಕೆ ಪ್ರಾರಂಭವಾಯಿತು. ಅದೂ ಕೂಡ ಅಂತಿಂತಹ ಸಾವಲ್ಲ, ದೈಹಿಕವಾಗಿ ನರಳಿ ನರಳಿ ಬದುಕು ಸಾಕಾಗಿ ಸಾವನ್ನು ಬಯಸುವ ಸಾವು ಅಂತ ಅನಿಸುವದಕ್ಕೆ ಶುರುವಾಯಿತು. ಯಾರೇ ಆಗಲಿ ನಾನು ಸಾಯುತ್ತೇನೆ ಅಂತ ದಿನಾಲೂ ವಿಚಾರ ಮಾಡುವದಿಲ್ಲ. ಎಲ್ಲರೂ ಸಾಯುವದು ನಿಶ್ಚಿತ ಅಂತ ಗೊತ್ತಿದ್ದರೂ, ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವದಿಲ್ಲ. ಸಾವಿನ ಮುಂಚಿನ ಜವಾಬ್ದಾರಿಗಳ ಬಗ್ಗೆ ಮೂವತ್ತೈದರ ಆಸುಪಾಸಿನ ಸಾಮಾನ್ಯ ವ್ಯಕ್ತಿ ಬಹುಶಃ ಎಂದೂ ವಿಚಾರ ಮಾಡುವದಿಲ್ಲ. ಅದೇನಿದ್ದರೂ ಮಾರಕ ರೋಗದ ಜೊತೆ ಬದುಕುವವರು ಇಲ್ಲಾ ವಯಸ್ಸು ಐವತ್ತು ದಾಟಿರುವವರು ಮಾಡುವ ಕೆಲಸ ಅಂತ ಅಂದುಕೊಂಡಿದ್ದೆ. ಆದರೆ ಈ ಆಘಾತ ನನಗೆ ಎದುರಾದ ತಕ್ಷಣ ನನ್ನ ಕಣ್ಣ ಮುಂದೆ ಬಂದದ್ದು ನನ್ನೆರಡು ಎಳೆಯ ಕಂದಮ್ಮಗಳು ಮತ್ತು ನನ್ನ ಅಮಾಯಕ ಹೆಂಡತಿಯ ಮುಖ, ಅಲ್ಲದೇ ಅವರೆಡೆಗೆ ನನ್ನ ಜವಾಬ್ದಾರಿಗಳು. ನನ್ನ ಮಕ್ಕಳ ಭವಿಷ್ಯವೇನು? ಅವರು ಅನಾಥರಾಗಿ ಅಬ್ಬೆಪಾರಿಯಾಗಿ ಹೋಗುವರೆ? ಅವರಿಗಾಗಿ ನಾನಿನ್ನೂ ಏನೂ ಮಾಡಿಯೇಯಿಲ್ಲವಲ್ಲ, ನನ್ನ ಹೆಂಡತಿಗೆ ನಾನು ಮೋಸ ಮಾಡಿದೆನಾ? ಅವಳು ನನ್ನ ಸ್ತಿತಿ ಅರಿತುಕೊಂಡರೆ ಜೀವಂತವಾಗಿ ಬದುಕಿರುವಳೇ? ಅವಳು ಕೂಡ ಇನ್ನೂ ಪ್ರಪಂಚ ನೋಡುವದಿದೆ, ಅಷ್ಟರಲ್ಲೇ ನಾನವಳಿಗೆ ಕತ್ತಲೆಯ ಬದುಕನ್ನು ಕೊಟ್ಟೆನಾ? ಅವಳ ಬಾಳನ್ನು ಹಾಳು ಮಾಡಿದೆನಾ? ನನ್ನ ಅತ್ತೆ-ಮಾವಂದಿರಿಗೆ ಹೇಗೆ ಮುಖ ತೋರಿಸಲಿ, ಅವರ ಮಗಳ ಬದುಕು ನನ್ನಿಂದ ಹಾಳಾಗುವದೆ?ಇನ್ನೊಬ್ಬರ ಜೀವನ ಹಾಳು ಮಾಡುವಂತಹ ಪಾಪ ಕೃತ್ಯ ನಾನೆಸಗಿದೇನೆಯಾ? ಅವಳಿಗೂ ನನ್ನ ರೋಗ ತಗುಲಿರಬಹುದೇ? ಹಾಗಾದರೆ ಅವಳಿಗಾದ ಅನ್ಯಾಯದ ಹೊಣೆಗಾರ ನಾನಲ್ಲವೇ? ನನ್ನ ಹೆಂಡತಿಯ ಮೇಲೆ ಎಂದೂ ಇಲ್ಲದ ಎಲ್ಲಿಲ್ಲದ ಅಕ್ಕರೆ ಉಕ್ಕಿಬಂದಿತು, 

Comments

Popular posts from this blog

೮. ಎ ಆರ್ ಟಿ

೬. ನನ್ನ ಸೂತ್ರ