೭. ಖಾದ್ಯಗಳು

ಶುದ್ಧ ಶಖಾಹಾರವನ್ನು ಪಾಲಿಸುತ್ತಿದ್ದ ನಾನು ಆಹಾರ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಬೇಕಾಗಿತ್ತು, ಯಾಕೆಂದರೆ ನನಗೆ ಹಣ್ಣುಗಳನ್ನು ತಿನ್ನುವ ಅಭ್ಯಾಸವೇ ಇರಲಿಲ್ಲ. ಹಣ್ಣುಗಳಿಗಿಂತ ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ತಿನ್ನುವುದೇ ನನ್ನ ರೂಢಿಯಾಗಿತ್ತು. ಮೊದಲ ಬಾರಿ ಕೌನ್ಸಲಿಂಗ್ ಮಾಡಿದ ಸರಕಾರಿ ಅಸ್ಸ್ಪತ್ರೆಯ ಆ ಮಹಿಳೆ ದಿನಾಲೂ ಒಂದು ಕಿವಿ ಹಣ್ಣನ್ನು ತಿನ್ನಲು ಸಲಹೆಯಿತ್ತಿದ್ದಳು. ಹಾಗೆಯೇ ನಂತರದ ಅಲ್ಲೊಪಥಿ ಮತ್ತು ಆಯುರ್ವೇದದ ವೈದ್ಯರೆಲ್ಲರೂ ಕೂಡ ದಿನಾಲೂ ಒಂದಾದರು ಹಣ್ಣು ತಿನ್ನಬೇಕು ಅಂತ ಸೂಚಿಸಿದ್ದರು. ಹಾಲನ್ನು ನಿಯಮಿತವಾಗಿ ದಿನಾಲೂ ಕುಡಿಯಲು ಮತ್ತೆ ಪ್ರಾರಂಭಿಸಿದೆ. ವೈದ್ಯರು ಹೇಳಿದಂತೆ ದಿನಕ್ಕೆ ಒಂದು ಲೀಟರ್ ಕುಡಿಯುವದು ನನಗಾಗದಿದ್ದರೂ ಅರ್ಧ ಲಿಟರ್ ಕುಡಿಯುವದನ್ನು ತಪ್ಪದೇ ರೂಡಿಯಾಗಿಸಿಕೊಂಡೆ.

ಚವನ ಮಹರ್ಷಿಯ ಸೂತ್ರದಿಂದ ತಯಾರಾದ ಚವನ ಪ್ರಾಶವನ್ನು ಸೇವಿಸಿದರೆ ರೋಗ ನಿಯಂತ್ರಕ ಶಕ್ತಿ ವೃದ್ಧಿಸುವದು ಅಂತ ಓದಿ ತಿಳಿದಿದ್ದೆ. ಈ ವಿಷಯ ಮುಂಚೆಯಿಂದಲೂ ಗೊತ್ತಿದ್ದರೂ ನಾನು ಚವನ್ ಪ್ರಾಶ ಎಂದೂ ಸೇವಿಸಿರಲಿಲ್ಲ. ಆದರೆ  ಈಗ ತಕ್ಷಣ ಅದನ್ನು ತಂದು ಅವತ್ತಿನಿಂದ ತಪ್ಪದೇ ದಿನಾಲೂ ಎರಡು ಚಮಚ  ಸೇವಿಸುವದನ್ನುರೂಢಿಯಾಗಿಸಿಕೊಂಡೆ. ಮನೆಯಲ್ಲಿ ಒಂದು ಹಿಡಿಯಷ್ಟು ಮೊಳಕೆ ಕಾಳುಗಳನ್ನು ಮಾಡಿ ದಿನಾಲು ತಿನ್ನಲು ಪ್ರಾರಂಭಿಸಿದೆ. ಒಂದು ದಿನ ಮುಕಣಿ ಇನ್ನೊಂದು ದಿನ ಹೆಸರುಕಾಳು ಮತ್ತೊಂದು ದಿನ ಅಲಸಂದಿ ಮಗದೊಂದು ದಿನ ಅವರೇಕಾಳು, ಹೀಗೆ ದಿನ ಒಂದಕ್ಕೆ ಒಂದೊಂದು ಕಾಳು ನೆನೆಸಿ ಮರುದಿನ ಮೊಳಕೆಯೊಡೆದ ಮೇಲೆ ತಿನ್ನಲು ಶುರುವಿಟ್ಟೆ.

ಇನ್ಯಾರೋ ಹಸಿರು ಚಹಾ (ಗ್ರೀನ್ ಟೀ) ಕುಡಿದರೆ ವೈರಾಣು ಸಂಖ್ಯಾಬಲ(ವೈರಲ್ ಲೋಡ್) ಕುಗ್ಗುತ್ತದೆ ಅಂತ ಸೂಚಿಸಿದರು, ನನ್ನ ವೈದ್ಯ ಮಿತ್ರನಲ್ಲಿ ಇದರ ಬಗ್ಗೆ ವಿಚಾರಿಸಿದೆ. ಅವನು ಹೇಳುವಂತೆ ಅದು ಆಂಟಿ ಒಕ್ಸಿಡಂಟ ಅದನ್ನು ಸೇವಿಸಿದರೆ ನಷ್ಟವೇನೂ ಇಲ್ಲ, ಇನ್ನೂ ಲಾಭವಿದೆ ಅಂತ ತಿಳಿದುಕೊಂಡೆ. ಹಾಗೆಯೇ ಅದನ್ನು ಕಚೇರಿಯಲ್ಲಿ ದಿನಾಲೂ ಒಂದು ಸಾರಿ ಕುಡಿಯಲು ಪ್ರಾರಂಭಿಸಿದೆ. ಕಚೆರಿಯಲ್ಲ್ಲೂ ಆ ಚಹದ ಚೀಲ(ಟೀ ಬ್ಯಾಗ್)ನ್ನು ಇಟ್ಟಿರ್ತಾರೆ. ಅದನ್ನೇ ಒಂದು ದೊಡ್ಡ ಕಪ್ ನಲ್ಲಿ ಹಾಕಿಕೊಂಡು ಕುಡಿಯುತ್ತೇನೆ
ಮದ್ಯಪಾನವಂತು ವರ್ಷಕ್ಕೆ ಒಂದೋ ಇಲ್ಲಾ ಎರಡು ಸಾರಿ ಮಾಡುತ್ತಿದ್ದ ನಾನು ಅದನ್ನು ಸಂಪೂರ್ಣವಾಗಿ ಬಿಡಲು ನಿರ್ಧರಿಸಿದೆ. ಇನ್ನೂ ಧುಮಪಾನದ ಚಟಗಾರನಲ್ಲದಿದ್ದರೂ ನಾನು ವಾರಕ್ಕೆ ಒಂದೋ, ಎರಡೋ ಸೇವಿಸುತ್ತಿದ್ದೆ ಅದನ್ನೂ ಕೂಡ ಬಿಟ್ಟುಬಿಟ್ಟೆ. ಇದೆಲ್ಲಾ ನನ್ನ ಆರೋಗ್ಯ ವೃದ್ಧಿಗೆ ಸ್ವಲ್ಪ ಸಹಕರಿಸಬಹುದು ಅನ್ನುವದು ನನ್ನ ಅಭಿಪ್ರಾಯವಾಗಿತ್ತು. 

Comments

Popular posts from this blog

೧. ಫಲಿತಾಂಶ

೮. ಎ ಆರ್ ಟಿ

೨. ಪರಿಣಾಮ