೬. ನನ್ನ ಸೂತ್ರ

ವೈರಾಣು ಪತ್ತೆಯ ಪರೀಕ್ಷಾ ಫಲಿತಾಂಶದ ನಂತರ, ವ್ಯಕ್ತಿಯ ಮಾನಸಿಕ ಬದಲಾವಣೆಗಳು ಹೇಗಾಗುತ್ತದೆ ಅನ್ನುವದಕ್ಕೆ ಮೂರು ಹಂತದ ಒಂದು ಸೂತ್ರವನ್ನು ನಾನೇ ಬರೆದುಕೊಂಡೆ.

Shock -  ಆಘಾತ, 
Worry - ಖೇದ,
Accept - ಸ್ವೀಕೃತಿ.

ಈ ವಿಷಯ ತಿಳಿದಾಕ್ಷಣ ಎಲ್ಲರಿಗೂ ಆಘಾತವಾಗುವದು ಸಹಜವೇ. ನನಗೆ ಹೀಗಾಯಿತಲ್ಲಾ, ನಾನು ಸಾವನ್ನು ಬರಮಾಡಿಕೊಳ್ಳುತ್ತಿದ್ದೀನಲ್ಲಾ. ನಾನು ಸಾಯುತ್ತೇನೆ ಅನ್ನುವ ಮಾರಣಾಂತಿಕ ವಿಚಾರವೇ ಮೊದಲು ಮನಸ್ಸಿಗೆ ಬರುವದು. ನಾಳೆನೆ ಸಾಯುತ್ತೇನೆ ಹಾಗನ್ನಿಸುವದು. ಎಷ್ಟೋ ಜನರಿಗೆ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. ನಾನಂತೂ ಮಲಗುವ ಪ್ರಯತ್ನ ಕೂಡ ಮಾಡಲಿಲ್ಲ.  ಇಂತಹ ಆಘಾತ ಯಾರಿಗೂ ಆಗದಿರಲಿ. ನಿಧಾನಕ್ಕೆ ಈ ಆಘಾತ ದುಃಖವಾಗಿ ಬದಲಾಗುವದು. ಸಾವಿನ ಚಿಂತೆಯಿಂದ ಸ್ವಲ್ಪ ಹಿಂದೆ ಸರಿದು, ಸಾವಿನ ಮುಂಚಿನ ಕಷ್ಟ ನೋವುಗಳನ್ನು ಮನ ನೆನೆಯುವದು. ನನಗೇಕೆ ಹೀಗಾಯಿತು? ನಾನೇನು ತಪ್ಪು ಮಾಡಿದೆ? ಯಾವ ಪಾಪದ ಫಲವಿದು? ನನ್ನ ಭವಿಷ್ಯವೇನು? ನಾನೆಷ್ಟು ದಿನ ನೋವಿನಲ್ಲಿರಬೇಕು? ಹೇಗೆಲ್ಲಾ ನೋವು ಅನುಭವಿಸಬೇಕು? ನಾನೆಷ್ಟು ಮೂರ್ಖ? ಹೇಗೆ ಎಡವಿದೆ? ಈ ಎಲ್ಲಾ ವಿಚಾರಗಳಿಂದ ಅಘಾತಗೊಂಡು, ಖೇದಪಟ್ಟು ಏನೂ ಉಪಯೋಗವಿಲ್ಲ, ಆದರೆ ಇವೆಲ್ಲಾ ಮನುಷ್ಯ ಸಹಜ ಭಾವನೆಗಳು, ಅವುಗಳನ್ನು ತಡೆಯುವದಕ್ಕೆ ಸಾಧ್ಯವಿಲ್ಲ. ಅನಾಯಾಸವಾಗಿ ಬಂದ ಈ ಘಟ್ಟಗಳನ್ನು ಆದಷ್ಟು ಬೇಗ ದಾಟಿ ಮೂರನೇ ಹಂತಕ್ಕೆ ನೆಗೆದರೆ ಒಳ್ಳೆಯದು. ಸ್ವೀಕೃತಿ. ಬಂದದ್ದನ್ನು ಸ್ವೀಕರಿಸಿ ಇನ್ನು ನನ್ನ ಜೀವನ ಹೀಗೆಯೇ, ಇದು ಜೀವನಪರ್ಯಂತ ನನ್ನ ಜೊತೆಗಿರುವುದು. ಇದರ ಚಿಂತೆಯಲ್ಲಿ ಕ್ಷೀಣವಾಗಿ ಚಿತೆಯೆಡೆಗೆ ಮುನ್ನುಗುವ ಬದಲು, ಇದನ್ನು ಅರಿತು, ಜೀವನಶೈಲಿ ಬದಲಿಸಿ ಸಮಾಧಾನದಿಂದ, ಎಚ್ಚರಿಕೆಯ ಹೆಜ್ಜೆಯಿಡುವದರಲ್ಲೇ ಅರ್ಥವಿದೆ. ಇದಲ್ಲದೇ ಬೇರೆ ಗತಿಯೇ ಇಲ್ಲ. ಒಂದು ಚಿಂತಿಸಿ, ದುಃಖಿಸಿ ನರಳಿ ಸಾವನ್ನು ಸ್ವಾಗತಿಸಬೇಕು, ಇಲ್ಲಾ ಧೈರ್ಯದಿಂದ ಧನಾತ್ಮಕ ವಿಚಾರಗಳಿಂದ ಮನಸ್ಸನ್ನು ಮುದಗೊಳಿಸುತ್ತಾ, ಸುತ್ತಯಿರುವವರನ್ನೆಲ್ಲ ಧೈರ್ಯ ತುಂಬುತ್ತಾ ಸಂತೋಷದಿಂದ ಇರಬೇಕು. ಎರಡನೆಯ ಮಾರ್ಗಕ್ಕೆ ನಮ್ಮನ್ನು ಯಾರು ಕರೆದುಕೊಂಡು ಹೋಗುವದಿಲ್ಲ ನಾವೇ ಆ ಮಾರ್ಗವನ್ನು ಸಾಧ್ಯವಾದಷ್ಟು ಬೇಗನೆ ಆಯ್ದುಕೊಂಡರೆ ಒಳ್ಳೆಯದು.        

Comments

Popular posts from this blog

೧. ಫಲಿತಾಂಶ

೮. ಎ ಆರ್ ಟಿ