೨. ಪರಿಣಾಮ

ನನ್ನ ಹೆಂಡತಿ ತವರಲ್ಲಿ ಇದ್ದುದರಿಂದ ತಕ್ಷಣ ಅವಳನ್ನು ಕರೆತರುವ ನಿರ್ಧಾರಮಾಡಿ, ಅವತ್ತೇ ಸಾಯಂಕಾಲ ಅವಳ ಊರಿಗೆ ರೈಲಿನ ಸಾಮಾನ್ಯ ಭೋಗಿಯಲ್ಲಿ ಕೂತು ಹೊರಟೆ. ನಾಳೆಯೇ ಅವಳನ್ನು ಇಲ್ಲಿಗೆ ಕರೆತಂದು ರಕ್ತ ಪರೀಕ್ಷೆ ಮಾಡಿಸೋಣ ಅಂತ ನಿಶ್ಚಯಿಸಿದೆ. ಭಗವಂತ ಅವಳನ್ನು ಸುರಕ್ಷಿತವಾಗಿಡಲಿ ಅಂತ ಬೇಡಿಕೊಳ್ಳುತ್ತಿದೆ. ಪ್ರಯಾಣದಲ್ಲಿ ಒಂದೆರಡು ಸಾರಿ ದುಃಖ ಉಮ್ಮಳಿಸಿಬಂದು, ಕಣ್ಣೀರು ತಾನಾಗೇ ಹರಿದಿದ್ದವು. ಹಾಗೂ ಹೀಗೂ ಮಾಡಿ ಸಹಪ್ರಯಾಣಿಕರಿಂದ ಮುಖ ಮುಚ್ಚಿಕೊಂಡು ಯಾರಿಗೂ ಗೊತ್ತಾಗದಂತೆ ಸಾಕಷ್ಟು ಅತ್ತಿದ್ದೆ, ಅದನ್ನೆಲ್ಲ ಮರೆಮಾಚಿ ಹುಸಿನಗೆಯೊಂದಿಗೆ ಬೆಳಿಗ್ಗೆ ಅತ್ತೆಯ ಮನೆ ಸೇರಿದ್ದೆ, ನನ್ನ ನೋಡಿದ ಕ್ಷಣದಲ್ಲೇ ಅತ್ತೆ ನನ್ನ ಪರಿಸ್ಥಿತಿ ಅರಿತು "ಈ ಸಾರಿ ತುಂಬಾ ಕಳೆಗುಂದಿದ್ದಾನೆ, ಸೊರಗಿ ಹೋಗಿದ್ದಾನೆ" ಅಂತ ಗೊಣಗುತ್ತಿದ್ದಳು. ನನ್ನ ಸ್ಥಿತಿಯನ್ನು ನಾನೆಷ್ಟು ಮುಚ್ಚಿಡಲು ಪ್ರಯತ್ನಿಸಿದರೂ ನನ್ನಿಂದಾಗಿರಲಿಲ್ಲ. ಮೊದಲೇ ಸೊರಗಿ ಅಲ್ಪಸ್ವಲ್ಪಯಿರುವ ಹೊಟ್ಟೆಯ ಬೊಜ್ಜು ಕರಗಿ ಹೋಗಿತ್ತು, ಅದರೊಟ್ಟಿಗೆ ಸದಾ ನಗುನಗುತ್ತಾ ಎಲ್ಲರನ್ನು ಮಾತಾಡಿಸಿಕೊಂಡು ಬರುವ ನಾನು, ಈ ಸಾರಿ ಮುಖ ಕಪ್ಪಿಟ್ಟುಕೊಂಡು ಬಂದಿರುವದನ್ನು ನೋಡಿ, ಅತ್ತೆಯ ಮನೆಯವರೆಲ್ಲ ಹಳಹಳಿಸಿದ್ದರು. ಪ್ರತಿ ಸಾರಿ ನನ್ನ ಮಕ್ಕಳು ಊರಿಗೆ ಹೋದಾಗ ಕೆಲವು ದಿನಗಳ ನಂತರ ಅವರನ್ನು ಕಂಡಾಗ ನನಗಾಗುವ ಆನಂದ ಈ ಸಾರಿ ನನಗಾಗಲಿಲ್ಲ. ಸುಮ್ಮನೆ ತುಟಿ ಅಗಲಿಸಿ ನಗುವ ಹಾಗೆ ಮಾಡಿ ಮಗನನ್ನು ಎತ್ತಿಕೊಂಡು, ಅಪ್ಪಿದೆ. ಆ ಅಪ್ಪುಗೆಯಲ್ಲಿ 'ಸಾಧ್ಯವಾದರೆ ನನ್ನನ್ನು ಕ್ಷಮಿಸಿಬಿಡು ಮಗನೆ' ಅನ್ನುವ ದೀನ ಭಾವ ಇತ್ತು. ಆ ಕಂದಮ್ಮಗೆ ಬಾಯಿಬಿಟ್ಟು ಹೇಳಿದರೆನೇ ಅರ್ಥವಾಗುವ ವಯಸ್ಸಲ್ಲ, ಇನ್ನು ನನ್ನ ಮನದ ಮಾತು ಹೇಗೆ ಅದು ಅರಿಯಲು ಸಾಧ್ಯ? ಮುಗ್ಧ ಮಗು ನನ್ನನ್ನು ಕಂಡು ಸಂತೋಷದಿಂದ ಬಿಗಿದಪ್ಪಿತು. ನೀವ್ಯಾರು ಕ್ಷಮಿಸದಂಥ ತಪ್ಪು ನಾನು ಮಾಡಿದ್ದೇನೆ, ಆದರೆ ಅದರ ಪರಿಣಾಮ ಮತ್ತು ಶಿಕ್ಷೆ ನನಗೆ ಮಾತ್ರ ಅಲ್ಲ ನಿಮಗೂ ಆಗಬಹುದು ಅಂತ ನನ್ನ ಒಳ ಮನಸ್ಸು ಹೇಳಿ ಇನ್ನೂ ಅಳುತ್ತಿತ್ತು. ದೊಡ್ಡ ಮಗ ಆಟವಾಡುತ್ತಾ ಜಾಣತನದ ಮಾತುಗಳನ್ನು ಹೇಳುತಿದ್ದರೆ ನನಗೆ ದುಃಖ ಉಕ್ಕಿ ಬಂದಿತು, ಅದನ್ನು ಅದುಮಿ ಯಾರಿಗೂ ತೋರಿಸದೆ ಮುಖ ಕೆಳಗೆ ಮಾಡಿ ದುಃಖ ನುಂಗಿದೆ. ಬಹುಶ: ಯಾರೂ ಗಮನಿಸಲಿಲ್ಲ ಅಂದುಕೊಂಡೆ. ಸ್ವಲ್ಪ ಸಮಯದ ನಂತರ ಚಿಕ್ಕ ಮಗು ನಗುತ್ತಾ ಹೊಟ್ಟೆ ಹೊಸೆಯುತ್ತಾ ನನ್ನ ಕಡೆ ಬರುವದನ್ನು ನೋಡಿ, ಅವನ ಜೀವನವನ್ನು ಹಾಳು ಮಾಡಿದೆ ಅನ್ನುವ ಪಾಪ ಪ್ರಜ್ಞೆ ಬಂದು ಮತ್ತೆ ದುಃಖ ಉಕ್ಕಲಾರಂಭಿಸಿತು. ಮತ್ತೆ ಅದನ್ನು ಅದುಮಿ ತೋರ್ಪಡಿಸದ ಹಾಗೆ ಇರಲು ಪ್ರಯತ್ನಿಸಿದೆ. ಈಗ ಕೂಡ ಯಾರೂ ನನ್ನನ್ನು ಗಮನಿಸಲಿಲ್ಲ ಅಥವಾ ಯಾರಿಗೂ ನನಗೆನಾಗುತ್ತಿದೆ ಅಂತ ಅರ್ಥವಾಗಿರಲಿಕ್ಕಿಲ್ಲ ಅಂತ ಅನಿಸಿತು.  

ಮಧ್ಯಾನ್ಹದ ಹೊತ್ತಿಗೆ ಬರುವ ಬಸ್ಸು ಹತ್ತಿ  ನಮ್ಮೂರಿಗೆ ಹೋಗುವದಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರಲು ನನ್ನ ಹೆಂಡತಿಗೆ ಮುಂಚೆಯೇ ಹೇಳಿದ್ದೆ. ನಾವು ಹೋಗುವದು ಇನ್ನು ಒಂದು ಘಂಟೆಯಿರುವಾಗ ಅತ್ತೆ ನನಗೆ ನನ್ನ ಹೆಂಡತಿಗೆ ಬುದ್ಧಿ ಮಾತುಗಳನ್ನು ಹೇಳಲು ಶುರುವಿಟ್ಟಳು. "ಇಬ್ಬರೂ ಜಗಳವಾಡಬೇಡಿ, ಸಹನೆಯಿಂದ ಇರಿ, ಕೋಪಿಸಕೊಳ್ಳಬೇಡಿ. ಸರಿಯಾಗಿ ಊಟ ಮಾಡಿ." ಹೀಗೆ ಏನೇನೋ ಹೇಳುತ್ತಿದ್ದಳು. ಅತ್ತೆ ನಾವು ಚೆನ್ನಾಗಿ ಬಾಳಿ ಬದುಕಬೇಕು ಅಂತ ಹೇಳುತ್ತಿದ್ದರೆ, ನನಗೆ ನನ್ನ ಪರಿಸ್ಥಿತಿಯ ಕಂಡು ನನ್ನ ದುಃಖ ಆಸ್ಫೋಟಗೊಂಡಿತು. ಈ ಸಾರಿ ನನಗೆ ಮರೆಮಾಚುವದು, ಅದುಮುವದು ಸಾಧ್ಯವಾಗಲಿಲ್ಲ. ನನ್ನ ಕಣ್ಣಿಂದ ನೀರು ಹರಿಯುತ್ತಿದ್ದರೆ, ನಾನು ಹಾಗೆಯೇ ಬಿಕ್ಕುತ್ತಿದ್ದೆ. "ಚಿನ್ನದಂಥಾ ಮಕ್ಕಳಿದ್ದಾರೆ, ಸರಿಯಾಗಿ ಬಾಳೆಮಾಡಿ" ಅಂತ ಹೇಳುತ್ತಿದ್ದರೆ, ನನ್ನ ಬಾಳೇ ಹಾಳಾಗಿಹೋಗಿದೆ ಇನ್ನೆಲ್ಲಿ ಸರಿಯಾಗಿ ಬದುಕಲಿ ಅಂತ ನನ್ನ ಒಳ ಮನಸ್ಸು ಕೇಳುತ್ತಿತ್ತು.

Comments

Popular posts from this blog

೧. ಫಲಿತಾಂಶ

೮. ಎ ಆರ್ ಟಿ

೬. ನನ್ನ ಸೂತ್ರ