೪. ವ್ಯಥೆ

ಒಂದು ಸಣ್ಣ ತಪ್ಪು, ಒಂದು ಚಿಕ್ಕ ನಿರ್ಲಕ್ಷ್ಯದ ಹೆಜ್ಜೆ ಹೇಗೆ ಇಷ್ಟು ದೊಡ್ಡ ಪರಿಣಾಮ ಬೀರಿತು. ನನ್ನ ಜೀವನವನ್ನು ಸರಿಪಡಿಸಲಾಗದಂತೆ ಶಿಕ್ಷಿಸುತ್ತಿದೆಯಲ್ಲಾ ಅಂತ ಸದಾ ಪರಿತಪಿಸುವಂತೆ ಆಯಿತು. ಆ ಭಗವಂತ ಎರಡನೆಯ ಅವಕಾಶವನ್ನು ಕೊಡಲಿಲ್ಲ, ಆಗಿರುವ ತಪ್ಪನ್ನು ಮೊದಲ ಸಾರಿಯಲ್ಲೇ ತಿದ್ದಿಕೊಳ್ಳಲು ಸಾಧ್ಯವೂ ಇಲ್ಲ. ಬದುಕಿರುವವರೆಗೂ ಇದನ್ನು ಶರೀರದಲ್ಲಿ ಇಟ್ಟುಕೊಂಡು ಸಾಗಬೇಕು.ಇರುವವರೆಗೂ ಸದಾ ಎಚ್ಚರದಿಂದಿರಬೇಕು, ನನ್ನಿಂದ ಮತ್ತೊಬ್ಬರಿಗೆ ಹರಡಬಾರದು ಅಲ್ಲದೆ ನನ್ನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಅನಾರೋಗ್ಯ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮುಂಚೆಯಿದ್ದ ಹಾಗೆ ಎಲ್ಲಂದರಲ್ಲಿ ಏನಂದರೆಲ್ಲ ಹೇಗೆಂದರೆ ಹಾಗೆ ಇರುವದಕ್ಕಾಗಲ್ಲ. ಯಾವಾಗಲೋ ಒಮ್ಮೆ ವಾರಕ್ಕೊಂದರಂತೆ ಸೇದುತ್ತಿದ್ದ ಸಿಗರೇಟ್ ಬಿಡಬೇಕಾಯಿತು. ನಾನು ಸಿಗರೇಟ್ ಚಟಗಾರನಲ್ಲದಿದ್ದರೂ, ಬೇಕೆಂದಾಗ ಒಮ್ಮೊಮ್ಮೆ ಒಂದು ಸೇದುತ್ತಿದ್ದೆ. ಈಗ ಬೇರೆಯರು ಯಾವುದೇ ಮುಲಾಜಿಲ್ಲದೇ ಹಾಯಾಗಿ ಸೇದುವದನ್ನು ನೋಡಿ ನಾನು ಸೇದಕ್ಕಾಗಲ್ಲವಲ್ಲ ಅಂತ ಖೇದವಾಗುತ್ತದೆ. ಸಿಗರೇಟ್ ಸೇದುವದೇನು ಒಳ್ಳೆಯ ವಿಚಾರವಲ್ಲದಿದ್ದರೂ, ಸೇದುವವರ ಸ್ವೇಚ್ಛಾಚಾರ ನನಗಿಲ್ಲವಲ್ಲ ಅಂತ ಅನಿಸುವದು.
  
ಅತೀವ ಸಿಹಿ ತಿಂದು ಮಧುಮೇಹವಾಗಿದ್ದರೂ ಸಹಿಸಿಕೊಳ್ಳಬಹುದಾಗಿತ್ತು, ಧುಮಪಾನದಿಂದ ಕ್ಯಾನ್ಸರ್ ಆಗಿದ್ದರೂ ಕೂಡ ಬಹುಶಃ ಮನಸ್ಸು ಇಷ್ಟು ಸೋಲುತ್ತಿರಲಿಲ್ಲ, ಮದ್ಯಪಾನದಿಂದ ಯಕೃತ್ತು ಕೆಟ್ಟು ಹೋಗಿದ್ದರೂ ಇಷ್ಟು ಜರ್ಜರಿತನಾಗುತ್ತಿರಲಿಲ್ಲ. ಅಂಥಹ ಪರಿಸ್ಥಿತಿಗಳನ್ನು ಜನರ ಮುಂದೆ ಹೇಳಿಕೊಳ್ಳಬಹುದಿತ್ತು. ಅವನ್ನೆಲ್ಲ ಒಂದು ಹಂತದಲ್ಲಿ ಗುರುತಿಸಿದರೆ ಮತ್ತೆ ಸಹಜ ಜೀವನಕ್ಕೆ ಮರಳಬಹುದಿತ್ತು. ಆದರೆ ಈ ಪರಿಸ್ಥಿತಿಯನ್ನು ಯಾರ ಮುಂದೆಯೂ ಹೇಳಲಿಕ್ಕಾಗಲ್ಲ. ಇದರಿಂದ ಯಾವುದೇ ಕಾಲಕ್ಕೂ ಯಾವುದೇ ರೀತಿಯಿಂದಲೂ ಮರಳಲಿಕ್ಕಾಗಲ್ಲ. 

ಎಂಥದಾದರೂ ಅಪಘಾತವಾಗಿ ನಾನು ತಕ್ಷಣ ಇರುವಲ್ಲೇ ಸತ್ತುಹೋಗಬೇಕು ಅಂತ ಒಮ್ಮೆ ಮನಸ್ಸು ದುಃಖದಿಂದ ಬಯಸಿದರೆ, ಇನ್ನೊಮ್ಮೆಮ್ಮೆ, ನಾನು ತೆಗೆದುಕೊಳ್ಳುವ ಔಷಧಿಯಿಂದ ಒಂದು ಅದ್ಭುತ ಘಟಿಸಿ, ಪವಾಡ ಸದೃಶವಾಗಿ ನಾನು ಇದರಿಂದ ಮುಕ್ತಿ ಹೊಂದಿ ಸಾಕಷ್ಟು ವರ್ಷ ಬದುಕಬೇಕು ಅನಿಸುತ್ತಿತ್ತು. ಈ ಎರಡೂ ನಾನು ಬಯಸಿದಂತೆ ಆಗುವವು ಅಲ್ಲ ಅನ್ನುವ ಸತ್ಯದ ಅರಿವು ಕೂಡ ನನಗಿತ್ತು. ಮುಂದಿನ ದಿನಗಳು ಹೇಗಿವೆಯೋ?  

ಇದು ಕೇವಲ ಅರೋಗ್ಯ ಅಥವಾ ದೈಹಿಕವಾಗಿ ಹಿಂಸೆ ಕೊಡುವ ಸಮಸ್ಯೆ ಅಲ್ಲ, ಒಮ್ಮೆ ಶರೀರವನ್ನು ಹೊಕ್ಕರೆ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಕಾಡುವ ಪಿಡುಗು. ಜೀವನಪರ್ಯಂತ ದಿನನಿತ್ಯ ಮಾತ್ರೆ ಸೇವಿಸಬೇಕು ಅಂದರೆ ಅದು ಆರ್ಥಿಕವಾಗಿ ಸುಸ್ಥಿತಿಯನ್ನೇ ಬಯಸುತ್ತದೆ. ತುಂಬಾ ಸಂಕೀರ್ಣತೆ ಇಲ್ಲದಿದ್ದರೆ ಸರಕಾರಿ ಎಆರ್ಟಿ ಕೇಂದ್ರದಲ್ಲಿ ದೊರೆಯುವ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಆದರೆ ರೋಗದ ತೀವ್ರತೆ ಹೆಚ್ಚಾದಾಗ ಸಮಸ್ಯೆ ತನ್ನ ಎಲ್ಲ ಆಯಾಮಗಳನ್ನು ಪ್ರದರ್ಶಿಸುತ್ತದೆ. 

Comments

Popular posts from this blog

೧. ಫಲಿತಾಂಶ

೮. ಎ ಆರ್ ಟಿ

೬. ನನ್ನ ಸೂತ್ರ